ಅಭಂಗ
ಮಹಾರಾಷ್ಟ್ರದ ಸಂತರು ತಮ್ಮ ಕಾವ್ಯಸೃಷ್ಟಿಗೆ ವಿಶೇಷವಾಗಿ ಬಳಸಿಕೊಂಡಿರುವ ಛಂದಸ್ಸು. ಕನ್ನಡ ಶರಣರ ವಚನಗಳಿದ್ದಂತೆ, ಹರಿದಾಸರ ಪದಗಳಿದ್ದಂತೆ, ಹಿಂದೀಸಂತರ ದೋಹಾಗಳಿದ್ದಂತೆ, ಮರಾಠೀಸಂತರ ಅಭಂಗ. ಪರಾಭಕ್ತಿಯ ಸಹಜ ಸಮಾಧಿಯ ಅವೇಶದಲ್ಲಿ ಮುಳುಗಿ ತನ್ಮಯರಾಗಿದ್ದಾಗ, ಅಪ್ರಯತ್ನವಾಗಿ ಹೊರಹೊಮ್ಮಿದ ಕಾವ್ಯಧಾರೆ ಇದು. ಆವಿಷ್ಟಸಾಹಿತ್ಯ ಮಹಾರಾಷ್ಟ್ರದಲ್ಲಿ ಚಕ್ರಧರನಿಂದ ಪ್ರವರ್ತಿತವಾದ ಮಹಾನುಭಾವ ಪಂಥದಿಂದ ಸ್ಫೂರ್ತಿ ಪಡೆದು, ಮುಂದೆ ಭಾಗವತಪ್ರಮುಖವಾದ ವಾರಕರೀಪಂಥದ ಬೆಳಕಿನಲ್ಲಿ ಜ್ಞಾನೇಶ್ವರ (1275-1296) ಮೊದಲಾದವರಿಂದ ಬಲಗೊಂಡು ತುಕಾರಾಮನಲ್ಲಿ (1608-1650) ಪ್ರೌಢಾವಸ್ಥೆಯನ್ನು ಮುಟ್ಟಿತು. ಅಭಂಗಗಳನ್ನು ಇತರ ಸಂತಕವಿಗಳು ರಚಿಸಿದ್ದರೂ ತುಕಾರಾಮನ ಹೆಸರಿನೊಂದಿಗೇ ಅಭಂಗವು ವಿಜೃಂಭಿಸಿದೆ. ತುಕಾರಾಮನು ಸಾಧನೆಯ ಪಥದಲ್ಲಿ ನಡೆಯುತ್ತ ತನಗೊದಗಿದ ಕ್ಲೇಶಪರಿತಾಪಗಳನ್ನು ಮನ ಮುಟ್ಟುವಂತೆ ತನ್ನ ಅಭಂಗಗಳಲ್ಲಿ ಹೆಣೆದಿದ್ದಾನೆ. ಅವನ ಅಂತಃಕರಣ ಶಬ್ದರೂಪವನ್ನು ಪಡೆದು ಅಭಿವ್ಯಕ್ತವಾದಾಗ ಅಭಂಗ ಮೈದಳೆಯಿತೆಂದು ವಿದ್ವಾಂಸರೊಬ್ಬರು ಬಣ್ಣಿಸಿದ್ದಾರೆ. ಅಭಂಗಗಳು ತಾವಾಗಿ ಶ್ರಮವಹಿಸಿ ಮಾಡಿದ ಕೃತಿಗಳಲ್ಲ, ದೇವರೇ ನುಡಿಸಿದ ಹಾಡುಗಳು ಎಂಬರ್ಥವನ್ನು ಕೊಡುವ ತುಕಾರಾಮನ ಅಭಂಗವೊಂದು ಪ್ರಸಿದ್ಧವಾಗಿದೆ (ತುಕಾಮ್ಹಣಿ ಜ್ರೇಂ ಜ್ರೇಂ ಬೋಲಾ| ತ್ರೇಂ ತ್ರೇಂ ಸಾಜೇಯಾ ವಿಟ್ಠಲಾ||). ತುಕಾರಾಮನ ಅಭಂಗಗಳು ಎಷ್ಟು ಪ್ರಭಾವಯುತವಾಗಿವೆಯೆಂದರೆ ಮಹಾರಾಷ್ಟ್ರದಲ್ಲಿ ಅವನ ಅಭಂಗವನ್ನು ಹಾಡದ ಮನುಷ್ಯನೇ ಇಲ್ಲವೆನ್ನುತ್ತಾರೆ. ಅಲ್ಲಿ ಭಾಗವತಪಂಥ ವಿಶೇಷವಾಗಿ ಕುದುರಲು ಈ ಅಭಂಗಗಳು ನೆರವಾದುವು. ಭಕ್ತಸಂತರು ಅತ್ಯುತ್ತಮ ಅನುಭಾವಿಕವಿಗಳಾಗಿದ್ದರೆಂಬುದು ಅಭಂಗಗಳಿಂದ ತಿಳಿದು ಬರುತ್ತದೆ. ಈ ಛಂದಸ್ಸು ಅವರಿಂದಲೇ ನಿರ್ಮಿತವಾಯಿತು. ಇದಕ್ಕೆ ಮೂಲವಾಗಿ ಓವೀ (ವೋವೀ) ಎಂಬ ಬಂಧ ಇದ್ದಿತೆಂದು ಹೇಳುತ್ತಾರೆ. ಓವಿಯಲ್ಲಿ ಗಣ, ಮಾತ್ರೆ, ಅಕ್ಷರಗಳು ನಿಯಮಿತವಾಗಿ ಬರುವುದಿಲ್ಲ. ಪ್ರತಿ ಓವಿಯಲ್ಲೂ ಒಂದೇ ಅಂತ್ಯಾಕ್ಷರವುಳ್ಳ ನಾಲ್ಕು ಚರಣಗಳಿದ್ದೂ ನಾಲ್ಕನೆಯ ಚರಣ ಪದಭಾಗವಾಗಿರುತ್ತದೆ.

			ವೇದಶಾಸ್ತ್ರಾ ಚಾ ಮಥಿತಾರ್ಥೂ
			ಮರಾಠೀ ಹೋ ಯಾ ಫಲಿತಾರ್ಥೂ
			ತರೀ ಚತುರ್ರೀಂ ಪರಮಾರ್ಥೂ
			ಕ್ರಾಂ ನಫ್ಯೌವಾ|

ಎನ್ನುವ ಮುಕುಂದರಾಜನ ಓವಿಯನ್ನು ಈ ದೃಷ್ಟಿಯಿಂದ ಗಮನಿಸುವುದು. ಓವೀಬಂಧ ಪರಿಣಿತವಾದದ್ದು. ಜ್ಞಾನೇಶ್ವರಿಯನ್ನು ಬರೆದ ಜ್ಞಾನದೇವ ಅಭಂಗಮಾಲೆಯೆಂಬ ಒಂದು ಕೃತಿಯನ್ನೂ ರಚಿಸಿದ್ದಾನೆ. ಅದರಲ್ಲಿ ಕನ್ನಡ ಅಭಂಗವೊಂದು ಸೇರಿದೆ.

			ಆಕ್ಕಾ ನೀ ಕೇಳೆ ಚಿಕನ ಮಾತು ಕೇಳುಲೆ? ಘನಿಗೆ ಮರುಳಾದೆನೆ ||1||
			ಚೆಲುವಾನೆ ಚೆಲುವಾನೆ
			ಪಂಢರಿರಾಯ ಚೆಲುವಾನೆ
			ಯಲ್ಲೆ ದೊರೆ ಕನ್ನೇ
			ಯಲ್ಲೆ ಬಾರನ್ನೆ   ||2||
			ಪುಂಡಲೀಕನೆ ಭಕ್ತಿಗೆ ಬಂದಾ,
			ರಖುಮಾದೇವೀವರ ವಿಟ್ಠಲುನೇ  ||3||

ವಿಟ್ಠಲಭಕ್ತಿ ಮಹಾರಾಷ್ಟ್ರದಲ್ಲಿ ಊರ್ಜಿತವಾಗುವುದಕ್ಕೂ ಜ್ಞಾನದೇವನೇ ಕಾರಣ. ವಿಟ್ಠಲೋಪಾಸನೆ ಮರಾಠೀಸಂತರ ವೈಶಿಷ್ಟ್ಯ. ಕರ್ಣಾಟಕದ ಹರಿದಾಸರು ಗೀತರಾಯಿಸುಳಾದ್ಯುಗಾಭೋಗಗಳಿಂದ ವಿಟ್ಠಲನನ್ನು ಪ್ರೀತಿಪಡಿಸಿದರೆ, ಮಹಾರಾಷ್ಟ್ರ ಸಂತರು ಅಭಂಗಗಳಿಂದ ಪಂಢರಪುರ ದೇವರನ್ನು ತೃಪ್ತಿಪಡಿಸಿದರು. ಹೀಗೆಂದೇ ವಿಟ್ಠಲನನ್ನು ಅಭಂಗ ವಿಟ್ಠಲನೆಂದು ವ್ಯವಹರಿಸುತ್ತಾರೆ. ಪಂಡರೀ ಕ್ಷೇತ್ರ ಒಂದು ಸಂತೆಯೆಂದೂ (ಪಂಡರೀನಾಮಾಚಾ ಬಾಜಾರ) ಅಲ್ಲಿ ಭಕ್ತಿಪ್ರೇಮಗಳ ಮಾರಾಟವಾಗುವುದೆಂದೂ ನಾಮದೇವ ಸಿಂಪೀ, ಗೋರಾಕುಂಭಾರ, ವಿಸೋಬಾಖೇಚರ, ನರಹರಿಸೋನಾರ ಮೊದಲಾದ ಭಕ್ತ ಕುಂಟುಂಬದವರು ಇಲ್ಲಿ ನೆರೆಯುತ್ತಿದ್ದರೆಂದೂ ಉಲ್ಲೇಖ ಬರುತ್ತದೆ. ಈ ಕುಟುಂಬದಲ್ಲಿ ಹಿರಿಯನೆನಿಸಿದ ನಾಮದೇವನು ಒಂದು ಕೋಟಿ ಅಭಂಗಗಳನ್ನು ರಚಿಸಬೇಕೆಂದು ನಿಶ್ಚಯಿಸಿದ್ದನಂತೆ. ಈ ಮನೋರಥ ಪೂರ್ಣವಾಗದಿರಲು ನಾಮದೇವನೇ ತುಕಾರಾಮನಾಗಿ ಜನ್ಮತಾಳಿ ನಿರ್ದಿಷ್ಟವಾದ ಸಂಖ್ಯೆಯನ್ನು ಸಿದ್ಧಿಸಿಕೊಂಡನೆಂದು ಪ್ರತೀತಿ ಇದೆ.
	
ನಾಮದೇವನ ಅಭಂಗದಲ್ಲಿ ನುಡಿಯ ಮೊದಲನೆಯ ಚರಣದಲ್ಲಿ 12 ಅಕ್ಷರಗಳೂ ಎರಡನೆಯ ಚರಣದಲ್ಲಿ 10 ಅಕ್ಷರಗಳೂ ಇರುತ್ತವೆ. ಗಣನಿಯಮವಾಗಲೀ ಮಾತ್ರಾನಿಯಮವಾಗಲೀ ಇಂದು ಮೊದಲನೆಯ ಚರಣದ ಅಂತ್ಯಾಕ್ಷರ ಎರಡನೆಯ ಚರಣದ ಆರನೆಯ ಅಕ್ಷರವಾಗಿರುವುದು ಎಂಬುದಾಗಿ ವಿದ್ವಾಂಸರ ಮತ. 1273-1297ರ ವರೆಗೆ ಬಾಳಿದ ಸೋಪಾನದೇವನೂ ಅದೇ ಸಮಯದಲ್ಲಿದ್ದ ಮುಕ್ತಾಬಾಯಿಯೂ ಅಭಂಗಗಳನ್ನು ಬರೆದಿದ್ದಾರೆ. ಆದರೆ ನಾಮದೇವನ ಕಾಲಕ್ಕೆ (1270-1350) ಅಭಂಗ ಪದ್ಧತಿ ವಿಶೇಷವಾಗಿ ಪ್ರಚಲಿತವಾಯಿತೆಂದು ಹೇಳುತ್ತಾರೆ. ಈತ ವರೆದ 65 ಅಭಂಗಗಳು ಸಿಖ್ ಜನರ ಪ್ರಸ್ಥಾನವಾದ ಗ್ರಂಥಸಾಹಿಬ್‍ದಲ್ಲಿ ಸೇರಿವೆ. ಈತನ ಅಭಂಗಗಳಲ್ಲಿ ಭಕ್ತಿಯ ನಿರಂತರ ಪ್ರವಾಹವನ್ನು ಕಾಣಬಹುದು. ತುಕಾರಾಮನು ಹದಿನೇಳನೆಯ ಶತಮಾನದವ. ಆವೇಶದ ಭರದಲ್ಲಿ ಈತನು ರಚಿಸಿದ ಅಭಂಗಗಳು ಕಾವ್ಯಪ್ರಪಂಚದಲ್ಲಿ ಧ್ರುವತಾರೆಗಳು.
	
ನಾಮಸ್ಮರಣೆಯಿಂದ ಈಶಪ್ರಾಪ್ತಿಯಾಗುವ ವಿಧಾನವನ್ನು ತುಕಾರಾಮ ಹೃದ್ಯವಾಗಿ ತನ್ನ ಅಭಂಗಗಳಲ್ಲಿ ವಿವರಿಸಿದ್ದಾನೆ. ಭಗವಂತನ ವಿಚಾರದಲ್ಲಿ ಅವನ ಅನನ್ಯನಿಷ್ಠೆಯನ್ನು ಕೆಳಗಿನ ಎರಡು ಅಭಂಗಗಳು ಪ್ರಸ್ತಾವಿಸುತ್ತವೆ:

			ಕೃಷ್ಣ ಮಾಝೀ ಮಾತಾ ಕೃಷ್ಣ ಮಾಝಾ ಪಿತಾ 
			ತುಕಾಮ್ಹಣೇ ಮಾಝಾ ಶ್ರೀಕೃಷ್ಣ ವಿಸಾವಾ||

ಕೃಷ್ಣನೇ ನನ್ನ ತಾಯಿ, ಕೃಷ್ಣನೇ ನನ್ನ ತಂದೆ; ಕೃಷ್ಣನೇ ನನ್ನ ವಿಶ್ರಾಂತಿ - ಹೀಗೆಂದು ತುಕಾ ಹೇಳುತ್ತಾನೆ.
			ದೇಹಭಾವ ಆಮ್ಹೀ ರೋಹಿಲೋ ಠೇವೂನೀ
			ನಿವಾಂತ ಚರಣೀ ವಿಠೋಬಾಚ್ಯಾ

ದೇಹದ ಅರಿವನ್ನು ವಿಟ್ಠಲನ ಪಾದಗಳಲ್ಲಿ ಸಮಾಧಾನದಿಂದ ಇರಿಸಿದ್ದೇನೆ.
	
ಅಭಂಗಗಳ ಆವೇಶಪರತೆಯನ್ನು ತೋರಿಸಲು ತುಕಾರಾಮನ ಈ ಅಭಂಗ ನೆರವಾಗುತ್ತದೆ:
			ಕೋಣ ಪುಣ್ಯ ಫಳಾ ಅಲ್ರೇಂ ಅಜೀ ದೇಖೆಲ್ರೀಂ ಪಾವೂಲ್ರೇಂ
			ಏಸ್ರೇಂ ನೇಣ್ರೋಂ ನಾರಾಯಣ ಸಂತೀ ಸಾಂಭಾಳಿಲ್ರೇಂ ದೀನಾ
			ಕೋಣ ಲಾಭ ಕಾಳ ದಿನ ಅಜೀಜಾ ಮಂಗಳ
			ತುಕಾಮ್ಹಣೇ ಝಾಲಾ, ಏವಡಾ ಲಾಭ ಕಾಂ, ವಿಟ್ಠಲಾ||

ಇಂದು ವಿಟ್ಠಲನ ಚರಣಗಳನ್ನು ಕಂಡೆ, ಎಷ್ಟು ಪುಣ್ಯದ ಫಲವೋ: ಸಂತರು ನನ್ನನ್ನು ಸಲಹಿದರು. ಯಾವುದೋ ಲಾಭದ ವೇಳೆ ಇದು, ಮಂಗಳದಿನ ಎಷ್ಟು ಲಾಭವೋ; ಹೀಗೆಂದ ತುಕಾ.						       

(ಎಸ್.ಕೆ.ಆರ್.)

(ಪರಿಷ್ಕರಣೆ: ಡಾ|| ಶ್ರೀನಿವಾಸ ಹಾವನೂರ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ